ಪೋರ್ಟರ್, ಎಲಿಯನೋರ್ ಹಾಜ್‍ಮನ್
	1868-1920 ಅಮೆರಿಕೆಯ ಕಾದಂಬರಿಕಾರಿಕಾರ್ತಿ ಮತ್ತು ಸಣ್ಣ ಕತೆಗಾರ್ತಿ. ಹುಟ್ಟಿದ್ದು ನ್ಯೂಹ್ಯಾಂಪ್ ಶೈರಿನ ಲಿಟ್ಲ್‍ಟನ್‍ನಲ್ಲಿ. ತಂದೆ ಫ್ರಾನ್ಸಿಸ್ ಎಚ್. ಹಾಜ್‍ಮನ್. ತಾಯಿ ಲಿವೆಲ ಹಾಜ್‍ಮನ್. ತಾಯಿ ರೋಗಪೀಡಿತೆ. ಚಿಕ್ಕಂದಿನಲ್ಲಿ ಈಕೆಯ ಆರೋಗ್ಯವೂ ಕೆಟ್ಟದ್ದರಿಂದ ಪ್ರೌಢಶಾಲೆಗೇ ಶಿಕ್ಷಣ ನಿಲ್ಲಿಸಿ ಆರೋಗ್ಯ ಸುಧಾರಣೆಗಾಗಿ ಬಯಲ ಜೀವನದಲ್ಲಿ ಕೆಲತಿಂಗಳು ಕಳೆದಳು. ಆರೋಗ್ಯ ಸುಧಾರಿಸಿದ ಮೇಲೆ ನ್ಯೂ ಇಂಗ್ಲೆಂಡಿನ ಕನ್ಸರ್ವೇಟರಿ ಆಫ್ ಮ್ಯೂಸಿಕ್ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸಿದಳು. ತನ್ನ 24ನೆಯ ವಯಸ್ಸಿನಲ್ಲಿ ಜಾನ್ ಎಲ್. ಪೋರ್ಟರ್ ಎಂಬಾತನನ್ನು ಮದುವೆಯಾದಳು. ಕ್ರಾಸ್‍ಕರೆಂಟ್ಸ್ ಈಕೆಯ ಮೊದಲ ಕಾದಂಬರಿ. ಬರೆದ 15 ವರ್ಷಗಳ ಅನಂತರ (1907) ಪ್ರಕಟವಾಯಿತು. ಮರುವರ್ಷವೇ ಅದರ ಎರಡನೆಯ ಭಾಗ ದಿ ಟರ್ನ್ ಆಫ್ ದಿ ಟೈಡ್ ಪ್ರಕಟವಾಯಿತು. ಈ ಕೃತಿಗಳಿಗೆ ಸಿಕ್ಕ ಪ್ರೋತ್ಸಾಹದಿಂದಾಗಿ ಮಿಸ್ ಬಿಲ್ಲೀಸ್ (1911); ಇದರ ಎರಡನೆಯ ಭಾಗ ಮಿಸ್ ಬಿಲ್ಲೀಸ್ ಡಿಸಿಷನ್ ಕಾದಂಬರಿಗಳು ಹೊರಬಂದವು. 1913ರಲ್ಲಿ ಪ್ರಕಟವಾದ ಪಾಲಿಯಾನ ಕಾದಂಬರಿ ಈಕೆಗೆ ಅಪಾರ ಕೀರ್ತಿಯನ್ನು ತಂದಿತು. ಅಮೆರಿಕೆಯ ಆಶಾವಾದದ ನಾಡಿಯನ್ನು ಮಿಡಿದ ಈ ಕಾದಂಬರಿಯ ನಾಯಕಿ ಪುಟ್ಟ ಹುಡುಗಿ ಪಾಲಿಯಾನ ಸಹಸ್ರಾರು ವಾಚಕರ ಮನಸ್ಸನ್ನು ಸೆಳೆದು ಜನಪ್ರಿಯಳಾದಳು. ಹತ್ತು ಲಕ್ಷಕ್ಕೂ ಮಿಕ್ಕು ಈ ಪುಸ್ತಕದ ಪ್ರತಿಗಳು ಮಾರಾಟವಾದವು. ಇದೇ ಸರಣಿಯಲ್ಲಿ ಪಾಲಿಯಾನ ಗ್ರೋಸ್ ಆಫ್ (1915) ಎಂಬ ಇನ್ನೊಂದು ಕಾದಂಬರಿ ಬಂದಿತು. ಈ ಕಾದಂಬರಿ ಅಬಾಲವೃದ್ಧರಾದಿಯಾಗಿ ಎಲ್ಲರ ಹೃದಯಗಳನ್ನೂ ರಂಜಿಸಿತು.

ಬದುಕಿನಲ್ಲಿ ನೋವು, ಕಷ್ಟ ಕಾರ್ಪಣ್ಯಗಳು ಇಲ್ಲದಿಲ್ಲ. ಆದರೆ, ಅವುಗಳಿಗೆ ಕುಗ್ಗದೆ ಹರ್ಷಚಿತ್ತರಾಗಿ ಅವನ್ನು ಎದುರಿಸಿ ನಿಲ್ಲುವುದೇ ಜೀವನ ಸಾಫಲ್ಯ ಎಂಬುದೇ ಈಕೆಯ ಜೀವನ ದೃಷ್ಟಿ. 

52 ನೆಯ ವಯಸ್ಸಿನಲ್ಲಿ (1920) ಈಕೆ ಮರಣ ಹೊಂದಿದಳು. ನಾಲ್ಕು ವರ್ಷಗಳ ಅನಂತರ ಈಕೆಯ ಸಣ್ಣ ಕತೆಗಳ ಸಂಗ್ರಹ ಪ್ರಕಟವಾಯಿತು. ಆದರೆ, ಕಾದಂಬರಿಗಳಲ್ಲಿ ಕಂಡ ಆಶಾವಾದ ಕತೆಗಳಲ್ಲಿ ಕಾಣಬರಲಿಲ್ಲ. ಈಕೆ ಸೃಷ್ಟಿಸಿದ ಅದಮ್ಯ ಆಶಾವಾದಿ ನಲಿವಿನ ಚೆಲುವೆ ಪಾಲಿಯಾನ ನಾಟಕರಂಗದ ಮೇಲೆ, ಚಲನಚಿತ್ರದ ಬೆಳ್ಳಿ ತೆರೆಯ ಮೇಲೆ, ಚಿರಂಜೀವಿಯಾಗಿ ರಾರಾಜಿಸಿದಳು. ತನ್ನ ಕರ್ತೃವಿನ ಸಂದೇಶವನ್ನು ಸಾರಿದಳು. 

ಈಕೆಯ ಇತರ ಕೃತಿಗಳು; ದಿ ಸ್ಟೋರಿ ಆಫ್ ಮಾರ್ಕೊ (1911); ಮಿಸ್ ಬಿಲ್ಲಿ ಮ್ಯಾರೀಡ್ (1914); ಜಸ್ಟ್ ಡೇವಿಡ್ (1916); ದಿ ರೋಡ್ ಆಫ್ ಆಂಡರ್‍ಸ್ಟ್ಯಾಂಡಿಂಗ್ (1917); ಓಹ್, ಮನಿ ! ಮನಿ ! (1918); ಡಾನ್ (1919); ಮೇ ಮಾರಿ (1919); ಸಿಸ್ಟರ್ ಸೂ (1921); ಸಣ್ಣ ಕತೆಗಳು-ಮನಿ, ಲವ್ ಅಂಡ್ ಕೇಟ್, ದಿ ಟೈ ದಟ್ ಬೈಂಡ್ಸ್, ದಿ ಟ್ಯಾಂಗಲ್ಡ್ ತ್ರೆಡ್ಸ್, ಎಕ್ರಾಸ್ ದಿ ಇಯರ್ಸ್ - ಈ ನಾಲ್ಕೂ ಕಥಾಗುಚ್ಚಗಳು 1924 ರಲ್ಲಿ ಪ್ರಕಟವಾದವು. 
(ಕೆ.ಬಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ